Home / Uncategorized / ಎಡವಟ್ಟುಗಳ ನಡುವೆ ಯಶಸ್ವಿಯಾಗಿ ನಡೆದ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ …….

ಎಡವಟ್ಟುಗಳ ನಡುವೆ ಯಶಸ್ವಿಯಾಗಿ ನಡೆದ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ …….

Spread the love

ಬೆಂಗಳೂರು, ಜೂ.18- ಕೊರೊನಾ ಆತಂಕದ ಭೀತಿ, ಅವ್ಯವಸ್ಥೆಗಳ ಆಗರ, ಹಲವು ಎಡವಟ್ಟುಗಳ ಅನಾವರಣ, ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಹಲವೆಡೆ ಸರ್ಕಾರದ ವಿಫಲತೆ ನಡುವೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಇಂಗ್ಲಿಷ್ ಪರೀಕ್ಷೆ ಬರೆದರು.

ಮಹಾಮಾರಿ ಕೊರೊನಾ ವ್ಯಾಪಿಸುತ್ತಿರುವ ನಡುವೆಯೂ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ದ್ವಿತೀಯ ಪಿಯುಸಿಯ ಬಾಕಿ ಉಳಿದಿದ್ದ ಇಂಗ್ಲಿಷ್ ಪರೀಕ್ಷೆ ನಡೆಸಲು ನಿಗದಿ ಮಾಡಿದ್ದ ಇಂದಿನ ದಿನಾಂಕದಲ್ಲಿ 5,95,997 ವಿದ್ಯಾರ್ಥಿಗಳು 1016 ಕೇಂದ್ರಗಳಲ್ಲಿ ಪರೀಕ್ಷೆ ಬರೆದರು.

ಕೊರೊನಾ ನಿಯಂತ್ರಣಕ್ಕಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ವಹಿಸಿತ್ತಾದರೂ ಹಲವು ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ನೂಕುನುಗ್ಗಲಿನಿಂದ ಎಡವಟ್ಟುಗಳಾದವು. ಆರಂಭದಲ್ಲಿ ಆತಂಕಕ್ಕೊಳಗಾಗಿದ್ದ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೊಠಡಿಗಳ ವಿವರ ಪಡೆಯಲು ಮುಗಿಬಿದ್ದರು. ಇದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆಗಲಿಲ್ಲ.

ಇನ್ನು ಹಲವೆಡೆ ಪರೀಕ್ಷಾ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಜಿಂಗ್ ಮಾಡಲು ಕೂಡ ಒತ್ತಡ ಹೆಚ್ಚಾಗಿ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು. ಮತ್ತೆ ಕೆಲವು ಕೇಂದ್ರಗಳಲ್ಲಿ ಎಲ್ಲ ಕೆಲಸಗಳೂ ಸುಸೂತ್ರವಾಗಿ ನಡೆದು ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಬರೆದರು. ಯಾದಗಿರಿ, ಮೈಸೂರು, ಬೆಂಗಳೂರಿನ ಹಲವೆಡೆ ಯಡವಟ್ಟುಗಳು ಸಂಭವಿಸಿದವು.

ಯಾದಗಿರಿಯ ಕಾಲೇಜೊಂದರ ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತು ತಮ್ಮ ಪರೀಕ್ಷಾ ಕೊಠಡಿ ವಿವರ ಪಡೆಯಲು ನೋಟಿಸ್ ಬೋರ್ಡ್‍ನತ್ತ ಏಕಕಾಲದಲ್ಲಿ ನುಗ್ಗಿದ್ದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗಲಿಲ್ಲ. ಪೋಷಕರು, ಪರೀಕ್ಷಾ ಸಿಬ್ಬಂದಿ, ಅಧಿಕಾರಿಗಳು ಮೂಕಪ್ರೇಕ್ಷಕರಾಗಬೇಕಾಯಿತು.

ಮೈಸೂರಿನ ಹಲವು ಕಾಲೇಜುಗಳಲ್ಲೂ ಕೂಡ ಏಕಕಾಲದಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದರಿಂದ ಥರ್ಮಲ್ ಸ್ಕ್ರೀನಿಂಗ್ ಮಾಡುವಲ್ಲಿ ಗೊಂದಲ ಉಂಟಾಯಿತು. ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಕೂಡ ಜಮಾಯಿಸಿದ್ದರು. ಹಾಗಾಗಿ ಕೆಲಕಾಲ ಗೊಂದಲ ಉಂಟಾಯಿತು.

ಉತ್ತರ ಕರ್ನಾಟಕದ ಹಲವೆಡೆ ಸರ್ಕಾರ ಎಷ್ಟೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ದಾವಂತದಲ್ಲಿ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಪರೀಕ್ಷಾ ಕೇಂದ್ರದತ್ತ ದಾವಿಸಿದರು. ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರುವಂತೆ ಸೂಚಿಸಲಾಗಿತ್ತು. ಮಾಸ್ಕ್ ಇಲ್ಲದವರಿಗೆ ಸರ್ಕಾರವೇ ಮಾಸ್ಕ್‍ಅನ್ನು ಪರೀಕ್ಷಾ ಕೇಂದ್ರಗಳಲ್ಲಿ ಕೊಡುವ ವ್ಯವಸ್ಥೆ ಮಾಡಿತ್ತು.

ಇತ್ತ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಇನ್ನಿತರೆಡೆ ವಿದ್ಯಾರ್ಥಿಗಳನ್ನು ಅಚ್ಚುಕಟ್ಟಾಗಿ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಎಲ್ಲ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ತೊಂದರೆಗಳಾಗದಂತೆ ಎಚ್ಚರ ವಹಿಸಲಾಗಿತ್ತು.

ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರದಲ್ಲಿಯೇ ಎಲ್ಲ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಗೆ ಬಿಡಲಾಗುತ್ತಿತ್ತು. ದೇಹದ ಉಷ್ಣಾಂಶ ಹೆಚ್ಚಾಗಿ ಕಂಡುಬಂದ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕೂರಿಸಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿತ್ತು.

ಬೆಂಗಳೂರು ಮತ್ತು ಗದಗದಲ್ಲಿ ಕೆಲವು ವಿದ್ಯಾರ್ಥಿಗಳಲ್ಲಿ ಹೆಚ್ಚು ಉಷ್ಣಾಂಶ ಕಂಡುಬಂದಿದ್ದು, ಅಂತಹವರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಯಿತು. ನಿಗದಿತ ಅವಧಿಯೊಳಗೆ ಪರೀಕ್ಷೆ ಪ್ರಾರಂಭವಾಗಿ ಆರಂಭದಲ್ಲಿದ್ದ ಆತಂಕ ಹಂತ ಹಂತವಾಗಿ ದೂರವಾಗಿ ವಿದ್ಯಾರ್ಥಿಗಳು ಅಂತೂ ಇಂತೂ ನಿರಾತಂಕವಾಗಿ ಪರೀಕ್ಷೆ ಬರೆದರು.

ಜೂ.25ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭವಾಗಲಿದೆ. ಈಗ ಆಗಿರುವ ಸಣ್ಣಪುಟ್ಟ ಎಡವಟ್ಟುಗಳನ್ನು ಸರಿಪಡಿಸಿಕೊಂಡು ಪರೀಕ್ಷಾ ಮಂಡಳಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಿದೆ.


Spread the love

About Admin Bapu

Check Also

ಬೆಳಗಾವಿ ಬಿಜಾಪುರ ಬಾಗಲಕೋಟಜಿಲ್ಲೆಗಳ 100 ಕೋಟಿ ಟೆಂಡರ್ ಆಹ್ವಾನ…

Spread the loveಬೆಳಗಾವಿ ,ಬಿಜಾಪುರ ,ಬಾಗಲಕೋಟ ,ಜಿಲ್ಲೆಗಳ ನೂರು ಕೋಟಿ ಟೆಂಡರ್ ಆಹ್ವಾನ… ಟೆಂಡರ್ ಮೊತ್ತ :   100ಕೋಟಿ   …

Leave a Reply

Your email address will not be published. Required fields are marked *