ಬೆಂಗಳೂರು, ಜೂ.19- ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೊಂಕಿತರ ಚಿಕಿತ್ಸೆಗೆ ಹೆಚ್ಚಿನ ದರ ನಿಗದಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೂತನ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ನೂತನ ದರ ಜಾರಿಯಾಗಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ನೂತನ ಮಾರ್ಗಸೂಚಿಯಂತೆ ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಒಂದೇ ಒಂದು ನಯಾ ಪೈಸೆ ಹೆಚ್ಚುವರಿ ಹಣ ಪಡೆಯುವಂತಿಲ್
ಒಂದು ವೇಳೆ ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆದರೆ ಅಂತಹ ಆಸ್ಪತ್ರೆಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಅವಕಾಶ ನೂತನ ಮಾರ್ಗ ಸೂಚಿಯಲ್ಲಿದೆ.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಂತರ ಸರ್ಕಾರ ಅಕೃತವಾಗಿ ಆದೇಶ ಹೊರಡಿಸಲಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ನೂತನ ಮಾರ್ಗ ಸೂಚಿಯಲ್ಲಿ ಬಿಬಿಎಂಪಿ, ಜಿಲ್ಲಾ ಆಸ್ಪತ್ರೆಗಳು ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಿದರೆ ಸರ್ಕಾರ ನಿಗದಿ ಮಾಡಿರುವ ದರವನ್ನೇ ಪಡೆಯಬೇಕು.
ಈ ಪ್ರಕಾರ ಗಂಟಲು ದ್ರವ ಪರೀಕ್ಷೆಗೆ 2600ರೂ., ಜನರಲ್ ವಾರ್ಡ್ ಚಿಕಿತ್ಸೆಗೆ 5200, ಆಕ್ಸಿಜನ್ಗೆ 7500ರೂ., ಐಸುಲೇಷನ್ ವಾರ್ಡ್ ಒಂದು ದಿನಕ್ಕೆ 8500ರೂ., ಐಸಿಯು/ವೆಂಟಿಲೇಟರ್ಗೆ 12 ಸಾವಿರ ರೂ. ದರ ನಿಗದಿ ಪಡಿಸಲಾಗಿದೆ.
ನೂತನ ಮಾರ್ಗ ಸೂಚಿಯಲ್ಲಿ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಉಚಿತವಾಗಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಬೇಕು. ರೋಗಿಗೆ ತಗಲುವ ಚಿಕಿತ್ಸಾ ವೆಚ್ಚವನ್ನು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಭರಿಸಲಿದೆ.
ಮೂಲಗಳ ಪ್ರಕಾರ ಮುಂದಿನ ದಿನಗಳಲ್ಲಿ ಯಾರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೋ ಅವರೆಲ್ಲರಿಗೂ ಸರ್ಕಾರವೇ ಚಿಕಿತ್ಸಾ ವೆಚ್ಚವನ್ನು ಭರಿಸಲಿದೆ ಎಂದು ತಿಳಿದು ಬಂದಿದೆ